ಕನ್ನಡ
From Wikipedia
ಕನ್ನಡ | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಕರ್ನಾಟಕ, ಭಾರತ | |
ಒಟ್ಟು ಮಾತನಾಡುವವರು: |
೫೫ ಮಿಲಿಯನ್ (೨೦೦೧) | |
ಶ್ರೇಯಾಂಕ: | ೨೯ | |
ಭಾಷಾ ಕುಟುಂಬ: | ದ್ರಾವಿಡ ಭಾಷೆಗಳು ದಕ್ಷಿಣ ದ್ರಾವಿಡ ತಮಿಳು-ಕನ್ನಡ ಕನ್ನಡ |
|
ಅಧಿಕೃತ ಸ್ಥಾನಮಾನ | ||
ಅಧಿಕೃತ ಭಾಷೆ: | ಕರ್ನಾಟಕ, ಭಾರತ | |
ನಿಯಂತ್ರಿಸುವ ಪ್ರಾಧಿಕಾರ: |
ಕರ್ನಾಟಕ ಸರ್ಕಾರದ ಹಲವು ಸಂಸ್ಥೆಗಳು | |
ಭಾಷೆಯ ಸಂಕೇತಗಳು | ||
ISO 639-1: | kn | |
ISO 639-2: | kan | |
ISO/FDIS 639-3: | kan
ಟೆಂಪ್ಲೇಟು:Infobox ಭಾಷೆ/IPA notice |
ದ್ರಾವಿಡ ಭಾಷೆಗಳಲ್ಲಿ ಬಹಳ ಹಳೆಯದರಲ್ಲಿ ಒಂದಾದ ಕನ್ನಡ ಭಾಷೆ/ನುಡಿಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ ಜನರು ಆಡುನುಡಿಯಾಗಿ ಬಳಸುತ್ತಾರೆ. ಇದು ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಒಂದು, ಹಾಗೂ ಕರ್ನಾಟಕ ರಾಜ್ಯದ ಅಧಿಕೃತ/ಸರಕಾರೀ ಭಾಷೆ.
ಪರಿವಿಡಿ |
[ಬದಲಾಯಿಸಿ] ಪರಿಚಯ
ಕನ್ನಡ ನುಡಿಯನ್ನು ಆಡುಮಾತಾಗಿ ೨೫೦೦ ವರ್ಷಗಳಿಂದ ಬಳಸಲಾಗುತ್ತಿದೆ. ಕನ್ನಡ ಲಿಪಿ ಮತ್ತು ಬರೆಯುವ ಪದ್ಧತಿ ಸುಮಾರು ೧೯೦೦ ವರ್ಷಗಳ ಹಿಂದೆಯೇ ಇದ್ದಿತು. ಕನ್ನಡ ಭಾಷೆಯ ಮೊದಲ ಬೆಳವಣಿಗೆಯು ಇತರ ದ್ರಾವಿಡ ನುಡಿಗಳನ್ನು ಹೋಲುತ್ತದೆ. ನಂತರದ ಶತಮಾನಗಳಲ್ಲಿ ಕನ್ನಡ ನುಡಿಯಲ್ಲಿ, ಸಂಸ್ಕೃತ/ಸಕ್ಕದ, ಪ್ರಾಕೃತ, ಮರಾಠಿ ಮತ್ತು ಪಾರಸೀ ಮುಂತಾದ ಹೊರಭಾಷೆಗಳ ಪ್ರಭಾವದಿಂದ ಕನ್ನಡದಲ್ಲಿ ಹೆಚ್ಚು ಹೆಚ್ಚು ಆ ನುಡಿಗಳ ಪದಗಳು ಬೆರೆತು ಹೋಗಲು ಶುರುವಾಯಿತು.
ಕನ್ನಡ ನುಡಿಯಲ್ಲಿ ಸಂಸ್ಕೃತದಂತೆ ಏಳು ವಿಭಕ್ತಿ ಪ್ರತ್ಯಯಗಳು ಇವೆ ಎಂದು ಹಲವು ವ್ಯಾಕರಣದ ಹೊತ್ತಿಗೆಗಳು ಹೇಳಿದರೂ, ಕನ್ನಡದಲ್ಲಿ ಸಂಸ್ಕೃತದ ಪ್ರಥಮ ಮತ್ತು ಪಂಚಮೀ ವಿಭಕ್ತಿಗಳ ಬಳಕೆ ಬಹಳ ಕಡಮೆ. ಕನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳನ್ನು ನಾಮಪದದ ಕೊನೆಯಲ್ಲಿ ಪ್ರತ್ಯಯಗಳನ್ನಾಗಿ(postfix) ಸೇರಿಸಲಾಗುವುದು. ಅಲ್ಲದೆ ಸಂಸ್ಕೃತದಲ್ಲಿ ಬಳಕೆಯಾಗುವ ವಿಭಕ್ತಿಯ ಸಂದರ್ಭ, ಸನ್ನಿವೇಶಗಳು ಕನ್ನಡದ ಬಳಕೆಗಿಂತ ವಿಭಿನ್ನ.
ಉದಾ: ಗ್ರಾಮಂ ಗತಃ = ಗ್ರಾಮಕ್ಕೆ ಹೋದನು. "ಗ್ರಾಮಂ" ದ್ವಿತೀಯ ವಿಭಕ್ತಿ ಆದರೆ, ಗ್ರಾಮಕ್ಕೆ ಚತುರ್ಥಿ ವಿಭಕ್ತಿ.
ಹಾಗೆಯೇ ಕನ್ನಡದಲ್ಲಿ ಸಂಸ್ಕೃತದ ವ್ಯಾಕರಣದಂತೆ, ಮೂರು ಲಿಂಗಗಳು (ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗ), ಎಂದು ಹೇಳಿದರೂ, ಕನ್ನಡದ ನಿಜ ಸ್ವರೂಪದಂತೆ ಕನ್ನಡದಲ್ಲಿ ನಾಲ್ಕು ಲಿಂಗಗಳನ್ನು(ಗಂಡು, ಹೆಣ್ಣು, ಮಾನುಷ, ಅಮಾನುಷ) ಗುರುತಿಸಬಹುದು. ಈ ಸಂಗತಿ ಕನ್ನಡದ ವಚನಗಳ ಬಗ್ಗೆ ತಿಳಿದಾಗ ಇನ್ನು ತಿಳಿಯಾಗುವುದು.
ಕನ್ನಡವೂ ಬೇರೆ ದ್ರಾವಿಡ ನುಡಿಗಳಂತೆ ಮಾನವರಲ್ಲದ ಎಲ್ಲ ಪ್ರಾಣಿಗಳನ್ನೂ ನಪುಂಸಕಗಳಂತೆ ನೋಡುವುದು.
ಉದಾ: ಎತ್ತು ಬಂದಿತು. ಗೂಳಿ ಗುದ್ದಿತು.
ಕನ್ನಡದಲ್ಲಿ ಎರಡು ವಚನಗಳು (ಏಕ ಮತ್ತು ಬಹು) ಇವೆ. ಏಕವಚನ ರೂಪಗಳು ( ಗಂಡು, ಹೆಣ್ಣು, ಮಾನುಷ, ಅಮಾನುಷ ) ಈ ನಾಲ್ಕು ಲಿಂಗದಲ್ಲಿ ಬರುವುದು.
ಉದಾ:
ಅವನು( ಪುಲ್ಲಿಂಗ, ಮಾನುಷ)
ಅವಳು( ಸ್ತ್ರೀಲಿಂಗ, ಮಾನುಷ)
ಅದು( ಅಮಾನುಷ )( ಆದರೆ 'ಅದು' ಎತ್ತನ್ನು ಕುರಿತು ಇದ್ದರೆ ಆಗ ಅದು ಪುಲ್ಲಿಂಗ, ಹಸುವನ್ನು ಕುರಿತು ಇದ್ದರೆ ಅದು ಸ್ರೀಲಿಂಗ ).
ಸಾಮಾನ್ಯವಾಗಿ ಬಹುವಚನ ರೂಪಗಳ ಮಾನುಷ ಮತ್ತು ಅಮಾನುಷ ಲಿಂಗಗಳಲ್ಲಿ ಮಾತ್ರ ಬರುವುದು. ಉದಾ:
ಅವರು ಬಂದರು; ಇಲ್ಲಿ 'ಅವರು' ಪದವು "ಒಂದಿಷ್ಟು ಮನುಷ್ಯರು" ಎಂದು ಹೇಳುತ್ತದೆ. ಹಾಗೆ
ಅವು ಬಂದವು; ಇಲ್ಲಿ 'ಅವು' ಪದವು "ಒಂದಿಷ್ಟು ಅಮಾನುಷಗಳು" ಎಂದು ಹೇಳುತ್ತದೆ.
ಕನ್ನಡದ ವಿಭಕ್ತಿ, ಲಿಂಗ, ವಚನಗಳು ಸಂಸ್ಕೃತದ ವಿಭಕ್ತಿ, ಲಿಂಗ, ವಚನಗಳಿಗಿಂತ ವಿಭಿನ್ನವಾಗಿದೆ.
ಕನ್ನಡ ಭಾಷೆಯ ಮಾತನ್ನಾಡಲ್ಪಡುವ(ಆಡುಮಾತು) ಮತ್ತು ಬರೆಯಲ್ಪಡುವ(ಬರಹ) ರೂಪಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ (ಆಗುವುದು-->ಆಗುತ್ತೆ, ಆಗುವುದಿಲ್ಲ-->ಆಗಲ್ಲ, ಇತ್ಯಾದಿ). ಮಾತನ್ನಾಡುವ ಶೈಲಿ, ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸಗೊಳ್ಳುತ್ತದೆಯಾದರೂ (ಮಂಗಳೂರು ಕನ್ನಡ, ಧಾರವಾಡ ಕನ್ನಡ ಇತ್ಯಾದಿ) ಬರವಣಿಗೆಯಲ್ಲಿ ಕರ್ನಾಟಕದಾದ್ಯಂತ ಕನ್ನಡ ಭಾಷೆ ಸರಿಸುಮಾರು ಏಕರೂಪವಾಗಿದೆ. ಸುಮಾರು ಇಪ್ಪತ್ತು ಕನ್ನಡದ ಉಪಭಾಷೆಗಳು ಗುರುತಿಸಲ್ಪಟ್ಟಿವೆ.
[ಬದಲಾಯಿಸಿ] ಬೆಳವಣಿಗೆ
ಕನ್ನಡವು ದಕ್ಷಿಣ ಭಾರತದ ಮೂಲಭಾಷೆ ದ್ರಾವಿಡದಿಂದ ಯಾವಾಗ ಆಡುಭಾಷೆಯಾಗಿ ಪರಿವರ್ತಿತವಾಯಿತೆಂದು ಖಚಿತವಾಗಿ ಹೇಳಲು ಅಸಾಧ್ಯ. ತಮಿಳು ಭಾಷೆಯು ದ್ರಾವಿಡ ಭಾಷೆಯಿಂದ ಬೆರ್ಪಟ್ಟ ಸಮಯದಲ್ಲಿಯೇ ಕನ್ನಡವು ಕೂಡ ಆಡುಭಾಷೆಯಾಗಿ ಬೆರ್ಪಟ್ಟಿತೆಂದು ಹೇಳಲಾಗುತ್ತದೆ. ಈ ಭಾಷೆಯ ಲಿಪಿಯು ಸುಮಾರು ೧೫೦೦-೧೬೦೦ ವರ್ಷಗಳಷ್ಟು ಹಳೆಯದೆಂದು ಹೇಳಲಾಗುತ್ತದೆ. ಕನ್ನಡವು ಮೊದಮೊದಲು ಇತರ ದ್ರಾವಿಡ ಭಾಷೆಗಳಂತೆ ಸಂಸ್ಕೃತ ಭಾಷೆಯಿಂದ ಸ್ವತಂತ್ರವಾಗಿ ಬೆಳೆಯಿತು. ನಂತರದ ಶತಮಾನಗಳಲ್ಲಿ ಕನ್ನಡವು ಭಾರತದ ಮತ್ತಿತರ (ತೆಲಗು,ಮಲಯಾಳ ಇತ್ಯಾದಿ)ಭಾಷೆಗಳಂತೆ ಸಂಸ್ಕೃತದ ಸಾಹಿತ್ಯಕ ಹಾಗೂ ಶಬ್ದಾವಳಿಯ ಪ್ರಭಾವಕ್ಕೊಳಗಾಯಿತು.
[ಬದಲಾಯಿಸಿ] ಭೌಗೋಳಿಕ ವ್ಯಾಪಕತೆ
ಕನ್ನಡ ಭಾಷೆಯನ್ನು ಪ್ರಮುಖವಾಗಿ ಭಾರತದ ಕರ್ನಾಟಕ ರಾಜ್ಯದಲ್ಲಿ ಉಪಯೋಗಿಸಲಾಗುತ್ತದೆ, ಮತ್ತು ಸ್ವಲ್ಪ ಮಟ್ಟಿಗೆ ಅಕ್ಕಪಕ್ಕದ ರಾಜ್ಯಗಳಲ್ಲಿ ಸಹ ಉಪಯೋಗಿಸಲಾಗುತ್ತದೆ. ಅಮೆರಿಕದ ಸಂಯುಕ್ತ ಸಂಸ್ಥಾನ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ಸಹ ಸಾಕಷ್ಟು ಕನ್ನಡಿಗರ ಜನಸಂಖ್ಯೆ ಇದೆ.
[ಬದಲಾಯಿಸಿ] ಅಧಿಕೃತ ಮಾನ್ಯತೆ
ಕನ್ನಡದ ಬಾವುಟ | |
---|---|
ಕನ್ನಡ ಭಾಷೆ ಭಾರತ ದೇಶದ ೨೨ ಅಧಿಕೃತ ರಾಷ್ಟ್ರ ಭಾಷೆಗಳಲ್ಲಿ ಒಂದು. ಕರ್ನಾಟಕ ರಾಜ್ಯದ ಏಕೈಕ ಅಧಿಕೃತ ಭಾಷೆ ಕನ್ನಡ.
[ಬದಲಾಯಿಸಿ] ಕನ್ನಡ ಅಕ್ಷರಮಾಲೆ
ಕನ್ನಡ ಅಕ್ಷರಮಾಲೆಯಲ್ಲಿ ೪೯ ಅಕ್ಷರಗಳಿದ್ದು, ಇದು ಒಂದು ಶಾಬ್ದಿಕ ಅಕ್ಷರಮಾಲೆ. ಕನ್ನಡ ಅಕ್ಷರಮಾಲೆಯಲ್ಲಿ ಬರುವ ಅಕ್ಷರಗಳು ಸರಿಸುಮಾರು ಎಲ್ಲ ಭಾರತೀಯ ಭಾಷೆಗಳಲ್ಲಿ ಬರುತ್ತವೆ. ತೆಲುಗು ಲಿಪಿ ಕನ್ನಡ ಭಾಷೆಯ ಲಿಪಿಯನ್ನು ಹೋಲುತ್ತದೆ, ಮತ್ತು ಒತ್ತಕ್ಷರ ಹಾಗೂ ಕಾಗುಣಿತಗಳ ದೆಸೆಯಿಂದ ಸಾಕಷ್ಟು ಸಂಕೀರ್ಣವಾದದ್ದು. ಕನ್ನಡ ಬರವಣಿಗೆಯ ಪ್ರತಿ ಚಿಹ್ನೆ ಒಂದು ಶಾಬ್ದಿಕ ಮಾತ್ರೆಯನ್ನು ಪ್ರತಿನಿಧಿಸುತ್ತದೆ. ಆಂಗ್ಲ (ಇಂಗ್ಲೀಷ್) ಮೊದಲಾದ ಭಾಷೆಗಳಲ್ಲಿ ಒಂದು ಚಿಹ್ನೆ ಒಂದು ಶಬ್ದವನ್ನು ಮಾತ್ರ ಪ್ರತಿನಿಧಿಸುತ್ತದೆ.
[ಬದಲಾಯಿಸಿ] ಕನ್ನಡ ಕಾಗುಣಿತ
ಕನ್ನಡ ಕಾಗುಣಿತವು ಪ್ರತಿಯೊಂದು ವ್ಯಂಜನಗಳಿಗೂ ಪ್ರತಿಯೊಂದು ಸ್ವರವನ್ನು ಸೇರಿಸುವುದು ಹೇಗೆ ಎಂದು ತಿಳಿಸಿಕೊಡುವ ವ್ಯಾಕರಣದ ಕ್ರಮ.
ಉದಾ: ಅ ಸ್ವರವನ್ನು ಸ್ ವ್ಯಂಜನಕ್ಕೆ ಸೇರಿಸಿದಾಗ, ಸ ಬರುತ್ತದೆ.
ಓ ಸ್ವರವನ್ನು ರ್ ವ್ಯಂಜನಕ್ಕೆ ಸೇರಿಸಿದಾಗ, ರೋ ಬರುತ್ತದೆ.
ಒಂದು ವ್ಯಂಜನದ ಸಂಪೂರ್ಣ ಕಾಗುಣಿತ, ಆ ವ್ಯಂಜನದ ಎಲ್ಲಾ ಸ್ವರಗಳೊಂದಿಗಿನ ಸಂಬಂಧವನ್ನು ತೋರಿಸುತ್ತದೆ.
ಉದಾ: ನ ಕಾಗುಣಿತ -> ನ ನಾ ನಿ ನೀ ನು ನೂ ನೆ ನೇ ನೈ ನೊ ನೋ ನೌ ನಂ ನಃ
[ಬದಲಾಯಿಸಿ] ಲಿಪ್ಯಂತರಣ
ಕನ್ನಡ ಅಕ್ಷರಗಳನ್ನು ಗಣಕಯಂತ್ರದಲ್ಲಿ ಸಾಮಾನ್ಯ ಕೀಲಿಮಣೆಯ ಮೂಲಕ ಮೂಡಿಸಲು ಅನೇಕ ಲಿಪ್ಯಂತರಣ ವಿಧಾನಗಳಿವೆ. ಇವುಗಳಲ್ಲಿ ಕೆಲವೆಂದರೆ INSCRIPT, ITRANS, ಬರಹ ಮತ್ತು ನುಡಿ. ಕರ್ನಾಟಕ ಸರ್ಕಾರದ ಅಧಿಕೃತ ಲಿಪ್ಯಂತರಣ ವಿಧಾನ ನುಡಿ. INSCRIPT ಶಿಷ್ಟಾಚಾರವನ್ನು ವಿಂಡೋಸ್ ಹಾಗೆಯೇ ಗ್ನೋಮ್ ಬಳಸುವ ಎಲ್ಲಾ ಕಾರ್ಯಾಚರಣ ವ್ಯವಸ್ಥೆಗಳೂ ಗುರುತು ಹಿಡಿಯುತ್ತವೆ.
[ಬದಲಾಯಿಸಿ] ಮುಂದೆ ಓದಿ
[ಬದಲಾಯಿಸಿ] ಬಾಹ್ಯ ಅಂತರ್ಜಾಲ ತಾಣಗಳು
- ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಇತಿಹಾಸ
- ಕನ್ನಡ ಅಕ್ಷರಗಳಿಗೆ ಅಧಿಕೃತವಾದ ಯೂನಿಕೋಡ್ ಪಟ್ಟಿ
- ಕನ್ನಡ ಭಾಷೆಯಲ್ಲಿ ಗಣಕೀಕರಣದ ವಿವರಗಳು
- ಸಂಪದ ಕನ್ನಡ ಕಲಿಕೆ ಕೇಂದ್ರ
- 'ಬೆಂಗಳೂರು ಬೆಸ್ಟ್.ಕಾಂ' ತಾಣದ 'ಕನ್ನಡ ಕಲಿಯಿರಿ' ಪುಟ
- ಕನ್ನಡದಲ್ಲಿ ಸರಳ ಪದಪುಂಜಗಳು
ಅಸ್ಸಾಮಿ | ಆಂಗ್ಲ(ಇಂಗ್ಲೀಷ್) | ಉರ್ದೂ | ಒಡಿಯಾ | ಕನ್ನಡ | ಕಾಶ್ಮೀರಿ | ಕೊಂಕಣಿ | ಕೊಡವ | ಗುಜರಾತಿ | ಡೋಗ್ರಿ | ತಮಿಳು | ತುಳು | ತೆಲುಗು | ನೇಪಾಲಿ | ಪಂಜಾಬಿ | ಬಂಗಾಳಿ | ಭೋಜಪುರಿ | ಬೋಡೊ | ಮಣಿಪುರಿ | ಮರಾಠಿ | ಮಲಯಾಳಂ | ಮೈಥಿಲಿ | ಸಿಂಧಿ | ಸಂಸ್ಕೃತ | ಹಿಂದಿ
ವರ್ಗಗಳು: ಭಾಷೆಗಳು | ಭಾರತೀಯ ಭಾಷೆಗಳು | ದ್ರಾವಿಡ ಭಾಷೆಗಳು | ಕನ್ನಡ | ಕರ್ನಾಟಕ