ಕಾವೇರಿ ನದಿ
From Wikipedia
ಕಾವೇರಿ | |
---|---|
|
|
ಉಗಮ | ತಲಕಾವೇರಿ |
ಕೊನೆ | ಬಂಗಾಳ ಕೊಲ್ಲಿ |
ಮೂಲಕ ಹರಿಯುವ ದೇಶಗಳು | ಭಾರತ (ಕರ್ನಾಟಕ ಮತ್ತು ತಮಿಳುನಾಡು) |
ಉದ್ದ | ೭೬೫ ಕಿ.ಮಿ. |
ಜಲನಯನ ಪ್ರದೇಶ | ೨೭,೭೦೦ ಚದುರ ಕಿ.ಮಿ. |
ಕಾವೇರಿ ಕರ್ನಾಟಕದ ಜೀವನದಿ. ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ತಲಕಾವೇರಿಯೆಂಬ ಸ್ಥಳದಲ್ಲಿ ಉಗಮಿಸುವ ಈ ನದಿ, ಮೈಸೂರು ಜಿಲ್ಲೆಯ ಮೂಲಕ ತಮಿಳುನಾಡಿಗೆ ಹರಿದು ಬಂಗಾಳಕೊಲ್ಲಿಯನ್ನು ಸೇರುತ್ತದೆ. ಮುಖ್ಯವಾಗಿ ದಕ್ಷಿಣ-ಪೂರ್ವ ದಿಶೆಯಲ್ಲಿ ಹರಿಯುವ ಈ ನದಿಯ ಪಥ ಸುಮಾರು ೭೬೫ ಕಿ.ಮಿ.ಗಳಷ್ಟು ಉದ್ದವಾಗಿದೆ. ಕಾವೇರಿ ಜಲಾನಯನ ಪ್ರದೇಶ ೨೭,೭೦೦ ಚದುರ ಮೈಲಿಗಳಷ್ಟಿದ್ದು, ಕಾವೇರಿಯ ಉಪನದಿಗಳಲ್ಲಿ ಶಿಂಶಾ, ಹೇಮಾವತಿ, ಅರ್ಕಾವತಿ, ಕಪಿಲಾ, ಕಬಿನಿ, ಲಕ್ಷ್ಮಣ ತೀರ್ಧ ಮತ್ತು ಲೋಕಪಾವನಿ ನದಿಗಳನ್ನು ಹೆಸರಿಸಬಹುದು.
ಕಾವೇರಿ 'ದಕ್ಷಿಣ ಗಂಗೆ'ಯೆಂದು ಪ್ರಸಿದ್ಧಿ ಪಡೆದ ಕರ್ನಾಟಕದ ಮಹಾನದಿ.ತುಲಾಮಾಸದಲ್ಲಿ ಕಾವೇರಿ ಸ್ನಾನ ಮಾಡಿದರೆ ಸಕಲ ಪಾಪಗಳೂ ನಾಶವಾಗುವುದೆಂಬ ನಂಬಿಕೆಯಿದೆ.ಕೊಡಗರು ಕಾವೇರಿಯನ್ನು ತಮ್ಮ ಕುಲದೈವದಂತೆ ಪೂಜಿಸುತ್ತಾರೆ.
ಪರಿವಿಡಿ |
[ಬದಲಾಯಿಸಿ] ಪೌರಾಣಿಕತೆ
ಕವೇರನೆಂಬ ಮುನಿಯ ಮಗಳಾದುದರಿಂದ ಕಾವೇರಿಯೆಂಬ ಹೆಸರು ಬಂದಿದೆ.ಮಹಾಭಾರತದ ಆದಿಪರ್ವದಲ್ಲಿ ಅರ್ಜುನನು ತೀರ್ಥಯಾತ್ರೆಗೆ ಹೋಗಿದ್ದಾಗ ಈ ನದಿಯಲ್ಲಿ ಸ್ನಾನ ಮಾಡಿದನೆಂಬ ಉಲ್ಲೇಖವಿದೆ.ರಾಜಸೂಯಯಾಗದ ಸಮಯದಲ್ಲಿ ನಕುಲನು ಇಲ್ಲಿಗೆ ಬಂದಿದ್ದ ಪ್ರಸ್ತಾಪ ಸಭಾಪರ್ವದಲ್ಲಿ ಬರುತ್ತದೆ. ಇನ್ನೊಂದು ಕಥೆಯ ಪ್ರಕಾರ ಅಗಸ್ತ್ಯ ಮುನಿಗಳ ಕಮಂಡಲ ಮಗುಚಿ ಬಿದ್ದಾಗ ಅದರ ನೀರು ಹೊರ ಚೆಲ್ಲಿತು ಅದೇ ಕಾವೇರಿ ನದಿಯಾಯಿತು.
[ಬದಲಾಯಿಸಿ] ನದಿಯ ಪಾತ್ರ
ಕೊಡಗಿನ ಬಳಿಯ ಬೆಟ್ಟಗಳನ್ನು ಬಿಟ್ಟ ನಂತರ ಕಾವೇರಿ ನದಿ ದಕ್ಷಿಣ ಪ್ರಸ್ಥಭೂಮಿಯ ಮೇಲೆ ಪೂರ್ವಕ್ಕೆ ಹರಿಯುತ್ತದೆ. ಈ ನದಿಯಲ್ಲಿ ಮೂರು ದ್ವೀಪಗಳಿವೆ - ಕರ್ನಾಟಕದಲ್ಲಿ ಶ್ರೀರಂಗಪಟ್ಟಣ ಮತ್ತು ಶಿವನಸಮುದ್ರ, ಹಾಗೂ ತಮಿಳುನಾಡಿನಲ್ಲಿ ಶ್ರೀರಂಗ. ಶಿವನಸಮುದ್ರದಲ್ಲಿ ಈ ನದಿ ೩೨೦ ಅಡಿಗಳ ಎತ್ತರದಿಂದ ಧುಮುಕಿ, ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಜಲಪಾತಗಳನ್ನು ಸೃಷ್ಟಿಸುತ್ತದೆ. ಭಾರತದ ಮೊದಲ ಜಲವಿದ್ಯುದಾಗಾರ ಇಲ್ಲಿ ೧೯೦೨ ರಲ್ಲಿ ಕಟ್ಟಲ್ಪಟ್ಟು ಬೆಂಗಳೂರು ನಗರಕ್ಕೆ ವಿದ್ಯುಚ್ಛಕ್ತಿಯನ್ನು ಒದಗಿಸುತ್ತಿತ್ತು.
ಹೊಗೇನಕಲ್ ಜಲಪಾತವಾಗಿ ತಮಿಳುನಾಡನ್ನು ಪ್ರವೇಶಿಸುವ ಈ ನದಿ, ತಂಜಾವೂರು ಜಿಲ್ಲೆಯ ಮುಖಾಂತರ ಹರಿದು ಕೊನೆಗೆ ಇಬ್ಭಾಗವಾಗಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
[ಬದಲಾಯಿಸಿ] ಕರ್ನಾಟಕದಲ್ಲಿ ಕಾವೇರಿ
ಕರ್ನಾಟಕದಲ್ಲಿ ಕಾವೇರಿ ನದಿಗೆ ಹನ್ನೆರಡು ಜಲಾಶಯ ಮತ್ತು ಅಣೆಕಟ್ಟುಗಳಿವೆ. ಈ ಎಲ್ಲ ಅಣೆಕಟ್ಟುಗಳ ಮುಖ್ಯೋದ್ದೇಶ ನೀರಾವರಿ. ಮಡದಕಟ್ಟೆಯ ಬಳಿ ಇರುವ ಅಣೆಕಟ್ಟಿನಿಂದ ಹೊರಡುವ ಕಾಲುವೆ ೭೨ ಮೈಲಿಗಳಷ್ಟು ಉದ್ದವಿದ್ದು, ೧೦,೦೦೦ ಎಕರೆಗಳ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ. ಇದೇ ಕಾಲುವೆ ಮೈಸೂರು ನಗರಕ್ಕೆ ಕುಡಿಯುವ ನೀರಿನ ಸೌಲಭ್ಯವನ್ನೂ ಭಾಗಶಃ ಒದಗಿಸುತ್ತದೆ. ಶ್ರೀರಂಗಪಟ್ಟಣದ ಬಳಿ ಇರುವ ಬಂಗಾರ ದೊಡ್ಡಿ ನಾಲೆ ಮೈಸೂರಿನ ಒಡೆಯರ್ ರಾಜಮನೆತನದ ರಣಧೀರ ಕಂಠೀರವ ಕಟ್ಟಿಸಿದ್ದು. ಕರ್ನಾಟಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅತಿ ಪ್ರಸಿದ್ಧ ಜಲಾಶಯ ಕೃಷ್ಣರಾಜಸಾಗರ.
[ಬದಲಾಯಿಸಿ] ತಮಿಳು ನಾಡಿನಲ್ಲಿ ಕಾವೇರಿ
ತಮಿಳು ನಾಡಿನ ಮೆಟ್ಟೂರು ಎಂಬಲ್ಲಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಲಾಗಿದೆ.