ಗುರುತ್ವ
From Wikipedia
ಗುರುತ್ವ - ಎಲ್ಲಾ ವಸ್ತುಗಳೂ ಒಂದನ್ನೊಂದು ಆಕರ್ಷಿಸಲು ಕಾರಣವಾದ ಬಲ. ಆಧುನಿಕ ಭೌತಶಾಸ್ತ್ರವು ಸಾಮಾನ್ಯ ಸಾಪೇಕ್ಷತಾ ವಾದದಿಂದ ಗುರುತ್ವವನ್ನು ವಿವರಿಸುತ್ತಾದರೂ, ಹೆಚ್ಚು ಸರಳವಾದ ನ್ಯೂಟನ್ನನ ಗುರುತ್ವ ನಿಯಮವು ಹಲವು ಸನ್ನಿವೇಶಗಳಲ್ಲಿ ಅತ್ಯುತ್ತಮ ಅಂದಾಜು ಪ್ರಮಾಣಗಳನ್ನು ಸೂಚಿಸುತ್ತದೆ. ಭೂಮಿ, ಸೂರ್ಯ ಮತ್ತಿತರ ಆಕಾಶಕಾಯಗಳ ಅಸ್ತಿತ್ವಕ್ಕೆ ಗುರುತ್ವವೇ ಕಾರಣ. ಗುರುತ್ವವಿಲ್ಲದೆ ಪದಾರ್ಥವು ಈ ಕಾಯಗಳಾಗಿ ಒಂದುಗೂಡುತ್ತಿರಲಿಲ್ಲ ಮತ್ತು ನಮಗೆ ಈಗ ತಿಳಿದಿರುವಂತಹ ಜೀವವು ಅಸ್ತಿತ್ವದಲ್ಲೇ ಇರುತ್ತಿರಲಿಲ್ಲ. ಗ್ರಹಗಳು ಸೂರ್ಯನ ಸುತ್ತ ಪರಿಭ್ರಮಿಸುವುದಕ್ಕೆ, ಚಂದ್ರನು ಭೂಮಿಯ ಸುತ್ತ ಪರಿಭ್ರಮಿಸುವುದಕ್ಕೆ, ಮತ್ತು ನಮಗೆ ಕಾಣುವ ಇನ್ನಿತರ ವಿವಿಧ ನೈಸರ್ಗಿಕ ಪ್ರಕ್ರಿಯಗಳಿಗೂ ಗುರುತ್ವವು ಕಾರಣ.