ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ
From Wikipedia
ಜಲಿಯನ್‍ವಾಲಾ ಬಾಗ್ ಹತ್ಯಾಹಾಂಡ (ಅಥವಾ ಅಮೃತಸರ ಹತ್ಯಾಹಾಂಡ) - ಅಮೃತಸರದಲ್ಲಿರುವ ಜಲಿಯನ್‍ವಾಲಾ ಬಾಗ್ ಉದ್ಯಾನದಲ್ಲಿ ಏಪ್ರಿಲ್ ೧೩, ೧೯೧೯ರಂದು ಬ್ರಿಟೀಷ್ ಭಾರತ ಸೇನೆಯಿಂದ ಅಲ್ಲಿ ನೆರೆದಿದ್ದ ಗಂಡಸರು, ಹೆಂಗಸರು, ಮಕ್ಕಳೆಲ್ಲರ ಮೇಲೆ ನಡೆಸಿದ ಗುಂಡಿನ ದಾಳಿಯ ಪರಿಣಾಮವಾಗಿ ನಡೆದ ಮಾರಣಹೋಮ. ಅಧಿಕೃತ ಮೂಲಗಳ ಪ್ರಕಾರ ಸಾವಿಗೀಡಾದವರ ಸಂಖ್ಯೆ ೩೭೯. ಖಾಸಗಿ ಮೂಲಗಳ ಪ್ರಕಾರ ಸಾವಿಗೀಡಾದವರ ಸಂಖ್ಯೆ ಸಾವಿರಕ್ಕೂ ಹೆಚ್ಚು, ಹಾಗು ಗಾಯಗೊಂಡವರ ಸಂಖ್ಯೆ ೧೨೦೦ಕ್ಕೂ ಹೆಚ್ಚು. [೧], ಮತ್ತು ಸಿವಿಲ್ ಶಸ್ತ್ರಚಿಕಿತ್ಸಾ ತಜ್ಞ ಡಾ.ಸ್ಮಿತ್ ನೀಡಿದ ಮಾಹಿತಿಯ ಪ್ರಕಾರ, ಸಾವಿಗೀಡಾದವರು ೧೮೦೦ಕ್ಕೂ ಹೆಚ್ಚು[೨]. ಈ ಅಂಕಿಅಂಶಗಳು ರಾಜಕೀಯ ಕಾರಣಗಳಿಂದಾಗಿ ಎಂದಿಗೂ ಧೃಢಪಟ್ಟಿಲ್ಲ.
ಪರಿವಿಡಿ |
[ಬದಲಾಯಿಸಿ] ಸಮಾವೇಶ
೧೯೧೯, ಏಪ್ರಿಲ್ ೧೩ರಂದು, ಪಂಜಾಬ್ ರಾಜ್ಯದ ಮುಖ್ಯವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಲ್ಲೊಂದಾದ ಅಮೃತಸರದಲ್ಲಿನ ಹೃದಯಭಾಗದಲ್ಲಿರುವ ಜಲಿಯನ್ವಾಲ ಬಾಗ್ ಉದ್ಯಾನದಲ್ಲಿ ಸಹಸ್ರಾರು ಮಂದಿ ಭಾರತೀಯರು, ಮುಖ್ಯವಾಗಿ ಪಂಜಾಬಿ ನಾಗರೀಕರು, ಸಮಾವೇಶಗೊಂಡಿದ್ದರು. ಅದು ಸಿಖ್ಖರ ಪವಿತ್ರ ದಿನಗಳಲ್ಲೊಂದಾದ ಬೈಸಾಖಿ ದಿನ. ಆ ಪವಿತ್ರದಿನದಂದು ಬೈಸಾಖಿ ಹಬ್ಬವನ್ನು ಆಚರಿಸಲು ಅಮೃತಸರದಲ್ಲಿ ಸಮಾವೇಶಗೊಳ್ಳುವುದು ಸಂಪ್ರದಾಯವಾಗಿ ರೂಪುಗೊಂಡಿತ್ತು. ಸಂವಹನ ತಂತ್ರಜ್ಞಾನವು ತೀರಾ ಹಿಂದುಳಿದಿದ್ದ ಪಂಜಾಬಿನಲ್ಲಿ, ಗ್ರಾಮೀಣ ಪ್ರದೇಶದಿಂದ ಅಮೃತಸರಕ್ಕೆ ಬರುತ್ತಿದ್ದ ಜನರಿಗೆ ಮಾಹಿತಿಯು, ಸಮಾಚಾರಗಳು ಲಭ್ಯವಾಗಿರಲಿಲ್ಲ. ಶಾಸನಬದ್ಧವಾಗಿ ಅಮೃತಸರದಲ್ಲಿ ಐದಕ್ಕಿಂತ ಹೆಚ್ಚಿನ ಜನ ಗುಂಪುಗೂಡುವಂತಿರಲಿಲ್ಲ (ಇದನ್ನು, 'ಮಾರ್ಷಲ್ ನಿಯಮ' ಎನ್ನುತ್ತಿದ್ದರು). ಆದ್ದರಿಂದ ಅಂದು ನಡೆದ ಸಮಾವೇಶ, ನಿಯಮದ ಉಲ್ಲಂಘನೆಯಾಗಿತ್ತು ಎನ್ನಲಾಗುತ್ತದೆ.
[ಬದಲಾಯಿಸಿ] ಹತ್ಯಾಕಾಂಡ
ತೊಂಬತ್ತು (೯೦) ಸೈನಿಕರಿದ್ದ ಬಂದೂಕುಗಳಿಂದ ಶಸ್ತ್ರಸಜ್ಜಿತವಾದ ತುಕಡಿಯೊಂದು ಉದ್ಯಾನವನಕ್ಕೆ ಎರಡು ಶಸ್ತ್ರಸಜ್ಜಿತ ಕಾರುಗಳೊಂದಿಗೆ ಬಂದಿತು. ಮೆಷಿನ್ಗನ್ ಗಳನ್ನು ಅಳವಡಿಸಲಾಗದ್ದ ಆ ವಾಹನಗಳು, ಉದ್ಯಾನದ ಕಡಿದಾದ ಬಾಗಿಲಿನಿಂದ ಬರಲು ಅಸಾಧ್ಯವಾಗಿತ್ತು.
ಆ ತುಕಡಿಯ ನಿಯಂತ್ರಕರಾದ ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಡೈಯರ್ ಅವರು, ಉದ್ಯಾನದೊಳಗೆ ಕಾಲಿಡುತ್ತಲೇ, ಅಲ್ಲಿ ನೆರೆದಿದ್ದವರಿಗೆ ಯಾವೊಂದು ಎಚ್ಚರಿಕೆಯನ್ನೂ ಕೊಡದೆ, ಗುಂಪು ಚದುರುವಂತೆ ಯಾವೊಂದು ಆದೇಶವನ್ನೀಯದೇ, ಹಠಾತ್ತಾಗಿ ಗುಂಡಿನ ಮಳೆಗರೆವಂತೆ ತಮ್ಮ ತುಕಡಿಗೆ ಆದೇಶವನ್ನಿತ್ತರು. ಅದರಲ್ಲಿಯೂ ವಿಶೇಷವಾಗಿ, ಜನಸಾಂದ್ರತೆ ಎಲ್ಲಿ ಹೆಚ್ಚಾಗಿರುವುದೋ ಅತ್ತಕಡೆ ಗುಂಡಿನ ದಾಳಿ ಕೇಂದ್ರೀಕೃತವಾಗುವಂತೆ ಆದೇಶಿಸಿದರು. ಗುಂಡಿನ ದಾಳಿಯು ಸಂಜೆ ೧೭:೧೫ಕ್ಕೆ ಪ್ರಾರಂಭವಾದದ್ದು ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ಕಾಲ, ಸತತವಾಗಿ ನಡೆಯಿತು. ಸುತ್ತಲೂ ಇಟ್ಟಿಗೆ ಗೋಡೆಗಳಿಂದ, ಕಟ್ಟಡಗಳಿಂದ ಆವೃತವಾಗಿದ್ದ ಉದ್ಯಾನವನಕ್ಕೆ ಇದ್ದದ್ದು ಐದು ಕಡಿದಾದ ದ್ವಾರಗಳು ಮಾತ್ರ. ಅದರಲ್ಲಿ ಬಹುತೇಕ ಶಾಶ್ವತವಾಗಿ ಮುಚ್ಚಲ್ಪಟ್ಟವಂಥವು. ತುಕಡಿಯಿದ್ದ ದ್ವಾರದ ಹೊರತಾಗಿ ಇನ್ನೊಂದೇ ದ್ವಾರವು ಮಾರ್ಗವಾಗಿ ಉಳಿದಿದ್ದರಿಂದ, ಕಂಗಾಲಾದ ಜನರು ಗೋಡೆಯನ್ನು ಹತ್ತಿ ಹಾರಲು ಪ್ರಯತ್ನಿಸಿದರು. ಬಹಳಷ್ಟು ಜನರು ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಉದ್ಯಾನದಲ್ಲಿದ್ದ ಬಾವಿಯೊಳಗೆ ಹಾರಿದರು. ಈ ಹತ್ಯಾಕಾಂಡ ಸ್ಮಾರಕದಲ್ಲಿನ ಅಂಶವೊಂದರ ಪ್ರಕಾರ, ಬಾವಿಯೊಂದರಿಂದಲೇ ಸುಮಾರು ೧೨೦ ಶವಗಳನ್ನು ಹೊರತೆಗೆಯಲಾಗಿತ್ತು.
ಹತ್ಯಾಕಾಂಡದಿಂದ ನೂರಾರು ಜನರು ಸಾವನಪ್ಪಿದರಲ್ಲದೆ, ಸಾವಿರಾರು ಮಂದಿ ಗಾಯಗೊಂಡರು. ಸರ್ಕಾರಿ ಮೂಲಗಳ ಪ್ರಕಾರ ೩೭೯ ಮಂದಿ ಸಾವನಪ್ಪಿದರಾದರೂ, ಆದರೆ ಸಾವಗೀಡಾದವರ ನಿಜವಾದ ಸಂಖ್ಯೆ ಇನ್ನು ಹೆಚ್ಚಿತ್ತು ಎನ್ನಲಾಗುತ್ತದೆ. ಕರ್ಫ್ಯು ವಿಧಿಸಿದ ಕಾರಣ, ಗಾಯಗೊಂಡ ಹಲವರನ್ನು ಹತ್ಯಾಕಾಂಡದ ಸ್ಥಳದಿಂದ ಇತರೆಡೆಗೆ ಸ್ಥಳಾಂತರಿಸಲಾಗಲಿಲ್ಲ. ನಿಜವಾದ ಸಾವಿನ ಸಂಖ್ಯೆಗಳ ಬಗ್ಗೆ ಇಂದಿಗೂ ಚರ್ಚೆ ನಡೆಯುತ್ತಲೇ ಇದೆ.
ಈ ಘಟನೆ ನಡೆದ ಬಳಿಕ, ಬ್ರಿಟಿಷ್ ಸೇನೆಗೆ, ವಿದ್ರೋಹಿ ಸೈನ್ಯವು ಎದುರಾದುದರಿಂದ, ಅವರಿಗೆ ತಕ್ಕ ಪಾಠ ಕಲಿಸಿದ್ದಾಗಿ, ಜನರಲ್ ಡೈಯರನು ತನ್ನ ಮೇಲಧಿಕಾರಿಗಳಿಗೆ ವರದಿಯೊಪ್ಪಿಸಿದನು. ಇದಕ್ಕೆ ಉತ್ತರಿಸಿದ ಪಂಜಾಬ್‌ನ ಅಂದಿನ ಲೆಫ್ಟಿನೆಂಟ್-ಗವರ್ನರ್ಆದ ಮೈಕಲ್ ಓ'ಡ್ವಾಯರ್,ಅವರಿಗೆ ತಕ್ಕ ಪಾಠ ಕಲಿಸಿದಿರಿ, ಲೆಫ್ಟಿನೆಂಟ್-ಗವರ್ನರ ಇದನ್ನು ಅನುಮೋದಿಸುತ್ತಾರೆ ಎಂದು ತಂತಿಯ ಮೂಲಕ ಜನರಲ್ ಡೈಯರ್‌ಗೆ ಸಂದೇಶ ಕಳುಹಿಸಿದರು.
ಮೈಕಲ್ ಓ'ಡ್ವಾಯರ್ನ ಇಚ್ಚೆಯಂತೆ ಈ ಘಟನೆಯ ನಂತರ, ಅಂದಿನ ವೈಸರಾಯ್ಯಾಗಿದ್ದ, ಫ್ರೆಡ್ರಿಕ್ ತೆಸಿಂಗರ್, ಅಮೃತಸರ ಹಾಗು ಅದರ ಸುತ್ತ-ಮುತ್ತ ಮಿಲಿಟರಿ ಆಡಳಿತವನ್ನು ಹೇರುವಂತೆ ಆದೇಶಿಸಿದನು.
ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಕುರಿತು ತನಿಖೆ ನಡೆಸಲು ಹಂಟರ್ ಆಯೋಗ ಅನ್ನು ಸ್ಥಾಪಿಸುವಂತೆ ಅಂದಿನ ಭಾರತದ ರಾಜ್ಯಾಂಗ ಕಾರ್ಯದರ್ಶಿಯಾಗಿದ್ದ ಎಡ್ವಿನ್ ಮೊಂಟಾಗೊ ನಿರ್ಧರಿಸಿದನು. ಈ ಆಯೋಗದೆದುರು ಮೈಕಲ್ ಓ'ಡ್ವಾಯರ್ನನ್ನು ಕರೆತರಲಾಯಿತು. ವಿಚಾರಣೆಯ ವೇಳೆ, ಜಲಿಯನ್‌ವಾಲ ಬಾಗ್ ನಲ್ಲಿ ಉದ್ದೆಶಿಸಲಾಗಿದ್ದ ಕಾರ್ಯಕ್ರಮದ ಬಗ್ಗೆ ತನಗೆ ಅಂದಿನ ದಿನ ೧೨.೪೦ರ ವೇಳೆಗೆ ತಿಳಿಯಿತಾದರೂ, ಇದನ್ನು ತಡೆಗಟ್ಟಲು ಯಾವುದೇ ಕ್ರಮ ಕೈಗೊಂಡಿರಲ್ಲಿಲ್ಲವೆಂದು, ಡ್ವಾಯರ್ ಒಪ್ಪಿಕೊಂಡನು. ಇದಲ್ಲದೆ, ತಾನು ಜಲಿಯನ್‌ವಾಲ ಬಾಗ್ ಗೆ ಗುಂಡು ಹಾರಿಸುವ ಉದ್ದೇಶದಿಂದಲೆ ತೆರಳಿದ್ದಾಗಿ ತಿಳಿಸಿದನು.
"ಜಲಿಯನ್‌ವಾಲಾ ಬಾಗನಲ್ಲಿ ಸೇರಿದ ಜನರನ್ನು ಚದುರಿಸಲು, ಗುಂಡಿನ ಅವಶ್ಯಕತೆ ಇರಲ್ಲಿಲವಾದರೂ, ತಾನು ಆ ಕ್ರಮ ಕೈಗೊಂಡಿರದಿದ್ದರೆ, ಜನರು ಮತ್ತೆ ಗುಂಪು ಸೇರಿ ತನ್ನನ್ನು ನೋಡಿ ಗೇಲಿ ಮಾಡಿ, ತಾನು ಒಬ್ಬ ಮೂರ್ಖನಂತೆ ತೋರುತಿದ್ದೆ" ಎಂದು ಹಂಟರ್ ಆಯೋಗದ ಮುಂದೆ ಡ್ವಾಯರ್ ತನ್ನ ನಿಲುವನ್ನು ಸ್ಪಷ್ಟಪಡಿಸಿದನು.
ಡ್ವಾಯರನು, ತಾನು ಗುಂಪನ್ನು ಒಂದು ಚಿಕ್ಕ ನಿರ್ದಿಷ್ಟ ಸ್ಥಳದಲ್ಲಿ ಗುಂಪು ಹಾಕಲು ಸಾದ್ಯವಾಗಿದ್ದರೆ, ತಾನು ಮಿಷಿನ್ ಬಂದೂಕನ್ನೇ ಪ್ರಯೋಗಿಸುತಿದ್ದುದ್ದಾಗಿ ರಾಜಾರೋಷವಾಗಿ ಆಯೋಗದ ಮುಂದೆ ಹೇಳಿಕೆಯನ್ನು ನೀಡಿದನು. ತಾನು ಜನರು ಚದುರುತಿದ್ದರುವುದನ್ನು ನೊಡಿದರೂ, ಅವರು ಸಂಪೂರ್ಣವಾಗಿ ಜಲಿಯನ್‌ವಾಲ ಬಾಗ್‌ನಿಂದ ತೆರವು ಗೊಳಿಸುವುದರ ತನಕ ಗುಂಡಿನ ಚಕಮಕಿಯನ್ನು ನಿಲ್ಲಿಸ ಬಾರದೆಂದು ನಿರ್ಧರಿಸಿದ್ದಾಗಿ ಹೇಳಿದನು.
ತನ್ನ ಹೇಳಿಕೆಯನ್ನು ಮುಂದುವರೆಸುತ್ತಾ, ತಾನು ಗಾಯಳುಗಳನ್ನು ನಿರ್ಲಕ್ಷಿಸಿದ್ದಾಗಿ, ಅವರ ಆರೈಕೆ ಆಸ್ಪತ್ರೆಗಳ ಕರ್ತವ್ಯವೆಂದನು.
[ಬದಲಾಯಿಸಿ] ಪ್ರತಿಕ್ರಿಯೆ
೧೯೨೦ರಲ್ಲಿ ಹಂಟರ್ ವರದಿಯ ಬಿಡುಗಡೆಯ ನಂತರ ಉಂಟಾದ ಜನರ ಆಕ್ರೋಶದ ಮಧ್ಯೆ , ಡೈಯರ್‍ನನ್ನು ನಿಷ್ಕ್ರಿಯ ಅಧಿಕಾರಿಗಳ ಪಟ್ಟಿಗೆ ಸೇರಿಸಲಾಯಿತು. ತುಕಡಿಯನ್ನು ನಿಯಂತ್ರಿಸುವ ಅಧಿಕಾರ ಇನ್ನು ಅವರಿಗಿಲ್ಲದ ಕಾರಣ, ಅವರ ಪದವಿಯನ್ನು ಕಮಾಂಡರ್ ಇನ್ ಚೀಫ್ ಇಂದ ಕರ್ನಲ್ ಪದವಿಗೆ ಮರುಕಳಿಸಲಾಯಿತು. ಅಂದಿನ ಕಮಾಂಡರ್-ಇನ್-ಚೀಫ್ ಅವರು ' ಡಯರ್‍ಗೆ ಭಾರತದಲ್ಲಿ ಇನ್ನು ಮುಂದೆ ಯಾವ ಕೆಲಸವನ್ನೂ ಕೊಡುವದಿಲ್ಲ ' ಎಂದು ಹೇಳಿಕೆ ನೀಡಿದರು . ಡೈಯರ್ ನ ಆರೋಗ್ಯವೂ ಚೆನ್ನಾಗಿರಲಿಲ್ಲ . ಅವನನ್ನು ಒಂದು ವೈದ್ಯಕೀಯ ಹಡಗಿನಲ್ಲಿ ಇಂಗ್ಲೆಂಡಿಗೆ ಅವನ ಮನೆಗೆ ಕಳಿಸಲಾಯಿತು.
ಕೆಲವು ಹಿರಿಯ ಬ್ರಿಟಿಷ್ ಅಧಿಕಾರಿಗಳು ಮತ್ತು ಭಾರತದ ಅನೇಕ ಸಾರ್ವಜನಿಕರು 'ಇನ್ನೊಂದು ಭಾರತೀಯ ದಂಗೆ'ಯನ್ನು ಅಡಗಿಸಿದ್ದಕ್ಕಾಗಿ ಅವನನ್ನು ಪ್ರಶಂಶಿಸಿದರು. ಲಾರ್ಡ್ಸ್ ಸಭೆ ಯು ಅವನನ್ನು ಹೊಗಳಿ ನಿರ್ಣಯವನ್ನು ಅಂಗೀಕರಿಸಿತು. ಆದರೆ ಹೌಸ್ ಆಫ್ ಕಾಮನ್ಸ್ , ಅವನನ್ನು ಖಂಡಿಸಿತು; ಆ ಚರ್ಚೆಯಲ್ಲಿ ವಿನ್‍ಸ್ಟನ್ ಚರ್ಚಿಲ್ ಪ್ರತಿಪಾದಿಸಿದ್ದು: "ಜಲಿಯನ್‍ವಾಲಾ ಬಾಗ್ ನಲ್ಲಿ ನಡೆದಿರುವ ಈ ಘಟನೆಯು ಒಂದು ಅಸಾಮಾನ್ಯ ಘಟನೆಯಾಗಿದ್ದು, ವಿಸ್ಮಯಗೊಳಿಸುವಂತಹ ಅಮಾನುಷ ದುಷ್ಕೃತ್ಯವಾಗಿದೆ, ಹಾಗು ಪಾಪಕೂಪದಲ್ಲಿ ಪ್ರತ್ಯೇಕವಾಗಿ ". ಡೈಯರ್‍ನ ಕ್ರಮವು ಜಗತ್ತಿನಾದ್ಯಂತ ನಿಂದಿಸಲ್ಪಟ್ಟಿತು . ಬ್ರಿಟೀಷ್ ಸರಕಾರವು ಅವನನ್ನು ಅಧಿಕೃತವಾಗಿ ಅಮಾನತುಗೊಳಿಸಿತು. ಅವನು ತನ್ನ ಹುದ್ದೆಗೆ ೧೯೨೦ರಲ್ಲಿ ರಾಜೀನಾಮೆ ಕೊಟ್ಟನು.
ಮಾರ್ನಿಂಗ್ ಪೋಸ್ಟ್ ಪತ್ರಿಕೆಯು ಡೈಯರ್‍ನಿಗಾಗಿ ಒಂದು ಸಹಾನುಭೂತಿ ನಿಧಿಯನ್ನು ಸ್ಥಾಪಿಸಿ ೨೬,೦೦೦ ಕ್ಕೂ ಹೆಚ್ಚು ಪೌಂಡ್‍ಗಳನ್ನು ಸಂಗ್ರಹಿಸಿತು . ಶುಭಕೋರಿರುವರ ಹೆಸರುಗಳನ್ನೊಳಗೊಂಡ ಸ್ಮರಣ ಸಂಚಿಕೆಯನ್ನು ಡೈಯರ್‍ಗೆ ಅರ್ಪಿಸಲಾಯಿತು.
ಭಾರತದಲ್ಲಿ ಈ ಹತ್ಯಾಕಾಂಡವು ಅತೀವ ದುಃಖ, ರೋಷವನ್ನು ಉಂಟುಮಾಡಿತು. ಈ ಹತ್ಯಾಕಾಂಡವು ಭಾರತದ ಸ್ವಾತಂತ್ರ್ಯ ಚಳುವಳಿಗೆ ವೇಗೋತ್ಕರ್ಷಕವಾಗಿ ಪರಿಣಮಿಸಿ, ಮಹಾತ್ಮ ಗಾಂಧಿಯವರ ಬ್ರಿಟೀಷರ ವಿರುದ್ಧದ ೧೯೨೦ರಲ್ಲಿ ನಡೆದ ಅಸಹಕಾರ ಸತ್ಯಾಗ್ರಹದಲ್ಲಿ ಹೆಚ್ಚಿನ ಉತ್ಸಾಹದಿಂದ ಜನರು ಪಾಲ್ಗೊಳ್ಳುವಂತಾಯಿತು.
ನೊಬೆಲ್ ಪ್ರಶಸ್ತಿ ವಿಜೇತರಾದ ರವೀಂದ್ರನಾಥ ಠಾಗೋರ್ ಅವರು ಪ್ರತಿಭಟನೆಯೆಂದು ತಮ್ಮ ನೈಟ್ ಪದವಿಯನ್ನು ಚಕ್ರವರ್ತಿಗೆ ಹಿಂತಿರುಗಿಸಿದರು .
[ಬದಲಾಯಿಸಿ] ಸ್ಮಾರಕ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮಂಡಿಸಿದ ನಿರ್ಣಯದ ಮೇರೆಗೆ, ಈ ಸ್ಥಳದಲ್ಲಿ ಒಂದು ಸ್ಮಾರಕವನ್ನು ನಿರ್ಮಿಸುವ ಸಲುವಾಗಿ ೧೯೨೦ರಲ್ಲಿ ಟ್ರಸ್ಟ್ ಒಂದನ್ನು ರಚಿಸಲಾಯಿತು. ೧೯೨೩ರಲ್ಲಿ ಇದಕ್ಕೆ ಬೇಕಾದ ಜಾಗವನ್ನು ಖರೀದಿಸಲಾಯಿತು. ಆ ಸ್ಥಳದಲ್ಲಿ ಸ್ಮಾರಕವನ್ನು ನಿರ್ಮಿಸಲಾಯಿತು. ಇದನ್ನು ೧೯೬೧, ಏಪ್ರಿಲ್ ೧೩ರಂದು, ಅಂದಿನ ಪ್ರಧಾನಿ ಜವಹರಲಾಲ್ ನೆಹರು ಮತ್ತಿತರ ಮುಖಂಡರ ಸಮ್ಮುಖದಲ್ಲಿ, ಭಾರತದ ಅಂದಿನ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರು ಉದ್ಘಾಟಿಸಿದರು. ನಂತರ ಜ್ಯೋತಿಯೊಂದನ್ನು ಇಡಲಾಯಿತು. ಗುಂಡಿನಿಂದಾದ ರಂಧ್ರಗಳನ್ನು ಇಂದಿಗೂ ಅಲ್ಲಿನ ಗೋಡೆಗಳ ಮೇಲೆ, ಅಕ್ಕಪಕ್ಕದ ಕಟ್ಟಡಗಳ ಮೇಲೆ ನೋಡಬಹುದಾಗಿದೆ. ಬಹಳಷ್ಟು ಜನರು ಧುಮುಕಿದ ಅಲ್ಲಿನ ಬಾವಿಯನ್ನು ಕೂಡ ಸಂರಕ್ಷಿಸಿ, ಸ್ಮಾರಕವನ್ನಾಗಿ ಮಾಡಲಾಗಿದೆ.
ಈ ಹತ್ಯಾಕಾಂಡದ ಚಿತ್ರಣವನ್ನು ರಿಚರ್ಡ್ ಅಟೆನ್‍ಬೊರೋ ನಿರ್ದೇಶನದ ೧೯೮೨ರಲ್ಲಿ ಬಿಡುಗಡೆಯಾದ ಗಾಂಧಿ ಚಲನಚಿತ್ರದಲ್ಲಿ, ಹಾಗು ಇತರ ಭಾರತೀಯ ಚಲನಚಿತ್ರಗಳಾದ ರಂಗ್ ದೇ ಬಸಂತಿ, ದಿ ಲೆಜೆಂಡ್ ಆಫ್ ಭಗತ್ ಸಿಂಗ್ ಚಿತ್ರಗಳಲ್ಲಿ ಅಳವಡಿಸಲಾಗಿದೆ.
[ಬದಲಾಯಿಸಿ] ಹತ್ಯಾಕಾಂಡಕ್ಕೆ ಪ್ರತೀಕಾರ
ಮಾರ್ಚ್ ೧೩ ೧೯೪೦ರಂದು ಸಿಖ್ಖರ ಕ್ರಾಂತಿಕಾರಿ ಎಂದು ಹೇಳಲಾಗುವ, ಹತ್ಯಾಕಾಂಡದ ಪ್ರತ್ಯಕ್ಷದರ್ಶಿ ಹಾಗು ಸ್ವತಃ ಗಾಯಗೊಂಡ, ಉಧಾಮ್ ಸಿಂಗ್ ಎನ್ನುವ ವ್ಯಕ್ತಿ ಮೈಕೇಲ್ ಓ'ಡ್ವೈರ್ ಅವರನ್ನು ಲಂಡನ್ನಿನ ಕ್ಯಾಕ್‍ಸ್ಟನ್ ಹಾಲ್ ನಲ್ಲಿ ಹತ್ಯೆಮಾಡಿದರು. ಮೈಕೇಲ್ ಓ'ಡ್ವೈರ್ ಅವರು ಹತ್ಯಾಕಾಂಡದ ಹಿಂದಿನ ಪ್ರಧಾನ ರೂವಾರಿ ಎಂದು ಹೇಳಲಾಗುತ್ತದೆ.
ಉಧಮ್ ಸಿಂಗ್ ಅವರ ಕೆಲಸಕ್ಕೆ ಮಿಶ್ರ ಪ್ರತಿಕ್ರಿಯೆ ಹರಿದು ಬಂದಿತು. ಖಂಡನೆಗಳ ಜೊತೆಗೆ, ಕೆಲವು ಕಡೆಯಿಂದ ಪ್ರಶಂಸೆಯೂ ಕೇಳಿ ಬಂದಿತು.
ನ್ಯಾಯಾಲಯದಲ್ಲಿ ಉಧಮ್ ಸಿಂಗ್ ಉದ್ಘೋಷಿಸಿದ ವಾಕ್ಯಗಳು: "ನಾನು ಹೀಗೆ ಮಾಡಲು ಕಾರಣ ಆತನ ಮೇಲಿದ್ದ ಹಗೆ. ಅದನ್ನು ಅವನು ಬರಮಾಡಿಕೊಂಡ. ಅವನೇ ನಿಜವಾದ ತಪ್ಪಿತಸ್ಥ. ನನ್ನ ಜನಗಳ ತೇಜೋವಧೆ ಮಾಡಲು ಅವನು ಬಯಸಿದ, ಹಾಗಾಗಿ ನಾನು ಅವನನ್ನು ಅಳಿಸಿಹಾಕಿದೆ. ಒಟ್ಟು ೨೧ ವರ್ಷದಿಂದ ನಾನು ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಕೊನೆಗೂ ನಾನು ಯಶಸ್ವಿಯಾದುದ್ದಕ್ಕೆ ನನಗೆ ಆನಂದವಾಗಿದೆ. ನಾನು ನನ್ನ ದೇಶಕ್ಕಾಗಿ ಸಾಯುತ್ತಿದ್ದೇನೆ. ನನ್ನ ಜನರು ಬ್ರಿಟೀಷರ ಆಳ್ವಿಕೆಗೆ ತುತ್ತಾಗಿ ಭಾರತದಲ್ಲಿ ಸಾಯುತ್ತಿರುವುದನ್ನು ನೋಡಿದ್ದೇನೆ. ಇದನ್ನು ವಿರೋಧಿಸಿದ್ದೇನೆ, ಅದು ನನ್ನ ಕರ್ತವ್ಯ. ತಾಯ್ನಾಡಿಗಾಗಿ ಪ್ರಾಣತ್ಯಾಗ ಮಾಡುವುದಕ್ಕಿಂತಲೂ ಹೆಚ್ಚಿನ ಗೌರವ ಇನ್ನೇನು ಸಿಗಲು ಸಾಧ್ಯ ನನಗೆ."[೩]
ಉಧಮ್ ಸಿಂಗ್ ಅವರನ್ನು ೧೯೪೦, ಜುಲೈ ೩೧ ರಂದು ಹತ್ಯೆಯ ಆರೋಪದ ಮೇಲೆ ಗಲ್ಲಿಗೇರಿಸಲಾಯಿತು. ದಿನಪತ್ರಿಕೆ ಡೈಲಿ ಪ್ರತಾಪ್ ನಲ್ಲಿ ಪ್ರಕಟವಾದ ಪ್ರಕಾರ, ೧೯೫೨ರಲ್ಲಿ ಜವಾಹರಲಾಲ್ ನೆಹರು ಅವರು ಕೆಳಕಂಡ ಹೇಳಿಕೆಯ ಮೂಲಕ ಉಧಮ್ ಸಿಂಗ್ ಕೆಲಸವನ್ನು ಪ್ರಶಂಸಿದರು: "ನಾವೆಲ್ಲರೂ ಸ್ವತಂತ್ರವಾಗಲೆಂದು ತನ್ನ ಪ್ರಾಣವನ್ನೂ ಲೆಕ್ಕಿಸದೆ ಮೃತ್ಯು ಬಾಗಿಲನ್ನು ತಟ್ಟಿದ ಶಾಹಿದ್-ಇ-ಅಜೀಮ್ ಉಧಮ್ ಸಿಂಗ್ ಅವರನ್ನು ಗೌರವಾದರಗಳಿಂದ ನಮಿಸುವೆ." [೪]
ಆದರೆ, ಇದಕ್ಕೂ ಮೊದಲು ಮಾರ್ಚ್ ೧೯೪೦ರಲ್ಲಿ, ನೆಹರು ಮತ್ತು ಮಹಾತ್ಮ ಗಾಂಧಿಯವರೂ ಒಳಗೊಂಡಂತೆ, ಬಹಳಷ್ಟು ಜನರು ಉಧಂ ಸಿಂಗ್ ಕೃತ್ಯವನ್ನು "ವಿವೇಚನಾ ರಹಿತ" ಎಂದು ಖಂಡಿಸಿದ್ದರು.
[ಬದಲಾಯಿಸಿ] ಉಲ್ಲೇಖನಗಳು
- ↑ Home Political Deposit, September, 1920, No 23, National Archives of India, New Delhi; Report of Commissioners, Vol I, New Delhi
- ↑ Report of Commissioners, Vol I, New Delhi, p 105
- ↑ CRIM 1/1177, Public Record Office, London, p 64
- ↑ ಉಲ್ಲೇಖಿಸಿರುವುದು: Udham Singh alias Ram Mohammad Singh Azaad, 2002, p 300, prof (Dr) Sikander Singh
[ಬದಲಾಯಿಸಿ] ಹೊರಗಿನ ಸಂಪರ್ಕಗಳು
- ಚರ್ಚಿಲ್ಲರ ಭಾಷಣ ಹತ್ಯಾಕಾಂಡದ ಘಟನೆಯ ಬಳಿಕ.
- ಜಲಿಯನ್ವಾಲ ಬಾಗ್ ಹತ್ಯಾಕಾಂಡ - ಒಂದು ವಿಸ್ತೃತ ವಿವರಣೆ ಹತ್ಯಾಕಾಂಡದ ಬಗ್ಗೆ.
ಭಾರತದ ಸ್ವಾತಂತ್ರ್ಯ | |
---|---|
ಚರಿತ್ರೆ: | ವಸಾಹತುಶಾಹಿ - ಈಸ್ಟ್ ಇಂಡಿಯಾ ಕಂಪನಿ - ಪ್ಲಾಸೀ ಕದನ - ಬಕ್ಸರ್ ಕದನ |
ತತ್ವಗಳು: | ರಾಷ್ಟ್ರೀಯತೆ - ಸ್ವರಾಜ್ - ಗಾಂಧಿವಾದ - ಸತ್ಯಾಗ್ರಹ - ಹಿಂದೂ ರಾಷ್ಟ್ರೀಯತೆ - ಸ್ವದೇಶಿ - ಸಮಾಜವಾದ |
ಘಟನೆ-ಚಳುವಳಿಗಳು: | ೧೮೫೭ರ ದಂಗೆ - ಬಂಗಾಳದ ವಿಭಜನೆ - ಕ್ರಾಂತಿಕಾರಿಗಳು - ಚಂಪಾರಣ ಮತ್ತು ಖೇಡಾ - ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ - ಅಸಹಕಾರ - ಸೈಮನ್ ಆಯೋಗ - ನೆಹರು ವರದಿ - ಉಪ್ಪಿನ ಸತ್ಯಾಗ್ರಹ - ೧೯೩೫ರ ಭಾರತ ಸರ್ಕಾರ ಕಾಯ್ದೆ - ಕ್ರಿಪ್ ಆಯೋಗ - ಭಾರತ ಬಿಟ್ಟು ತೊಲಗಿ - ಮುಂಬೈ ದಂಗೆ |
ಸಂಘಟನೆಗಳು: | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ - ಗದರ್ - ಹೋಂ ರೂಲ್ ಚಳುವಳಿ - ಭಾರತೀಯ ರಾಷ್ಟ್ರೀಯ ಸೇನೆ - ಆಜಾದ್ ಹಿಂದ್ - ಅನುಶೀಲನ ಸಮಿತಿ |
ನಾಯಕರು: | ಮಂಗಲ ಪಾಂಡೆ - ಝಾನ್ಸಿ ರಾಣಿ - ಬಾಲ ಗಂಗಾಧರ ತಿಲಕ್ - ಗೋಪಾಲ ಕೃಷ್ಣ ಗೋಖಲೆ - ಮಹಾತ್ಮಾ ಗಾಂಧಿ - ಸರ್ದಾರ್ ಪಟೇಲ್ - ಸುಭಾಷ್ ಚಂದ್ರ ಬೋಸ್ - ಜವಾಹರಲಾಲ್ ನೆಹರು - ಮೌಲಾನಾ ಆಜಾದ್ - ಚಂದ್ರಶೇಖರ್ ಆಜಾದ್ - ರಾಜಾಜಿ - ಭಗತ್ ಸಿಂಗ್ |
ಬ್ರಿಟಿಷ್ ಆಡಳಿತ: | ರಾಬರ್ಟ್ ಕ್ಲೈವ್ - ಲೂಯಿ ಮೌಂಟ್‌ಬ್ಯಾಟನ್ |
ಸ್ವಾತಂತ್ರ್ಯ: | ಕ್ಯಾಬಿನೆಟ್ ಆಯೋಗ - ಭಾರತದ ಸ್ವಾತಂತ್ರ್ಯ ಕಾಯ್ದೆ - ಭಾರತದ ವಿಭಜನೆ - ಭಾರತದ ರಾಜಕೀಯ ಒಗ್ಗೂಡುವಿಕೆ - ಭಾರತದ ಸಂವಿಧಾನ |